ಸೃಷ್ಟಿಕರ್‍ತ

ಸದಾ ಉತ್ಸವ ಜಗದೊಳಗೆ-
ಉಳುವ, ಬಿತ್ತುವ, ಟಿಸಿಲೊಡೆಯುವ
ಕಾಯಿಯಾಗುವ, ಮಾಗುವ ಸಂಭ್ರಮ ಪ್ರಕೃತಿಗೆ!
ಹಸಿರು ತೋರಣ, ಋತುಗಳ ಮೆರವಣಿಗೆ,
ಬಣ್ಣಗಳ ಚೆಲ್ಲಾಟ, ಹಕ್ಕಿಗಳ ಕಲರವ, ಗಾಳಿಯ ನಿನಾದ,
ಸೂರ್‍ಯನ ಬಿಸಿ, ಚಂದಿರನ ತಂಪು
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಭಾವಗಳ ರಂಗು ಹೃದಯದ ಒಸರಲ್ಲಿ
ಹೊಂಬಣ್ಣದ ತೆನೆ ಹಸಿರಿನ ಬಸಿರಲ್ಲಿ
ಬಣ್ಣಗಳ ಮೇಳ ಧರಣಿಯ ಉಸಿರಲ್ಲಿ
ಧರಿತ್ರಿಗೆ ಕಿರೀಟಗಳು ಹಿಮಚ್ಛಾದಿತ ಪರ್ವತಶ್ರೇಣಿಗಳು
ಏರದೆಗೆ ಪೀಠಗಳು ಗುಡ್ಡ ಬೆಟ್ಟಗಳು
ಜೀವಚರಗಳಿಗೆ ಜೀವಸೆಲೆ ಜಲಪಾತ, ಝರಿಗಳು.
ಜೀವಜಲಕೆ ಒಸರು ನದಿ, ಕೆರೆ, ಸರೋವರಗಳು!
ಹೇಗೆ ಸೃಷ್ಟಿಸಿದೆ ಇದನ್ನೆಲ್ಲ?

ಪ್ರಥ್ವಿಯ ಜತೆಗೆ ಸಾಗರವನ್ನಿಟ್ಟೆ
ಕಂಬಗಳಿಲ್ಲದೆ ಬಾನಿನ ಚಪ್ಪರ ಹಾಕಿಯೇ ಬಿಟ್ಟೆ
ಭೂಮಿಯ ಮೇಲೆ ಪಶುಪಕ್ಷಿ ಪ್ರಾಣಿಗಳ ಓಡಾಡಬಿಟ್ಟೆ,
ಮನುಷ್ಯರ ಸೃಷ್ಟಿಸಿ ಭಾವಗಳ ರಂಗನು ತುಂಬಿ ಆಳಲು ಬಿಟ್ಟೆ
ಸಾಗರದೊಳಗೆ ಬಣ್ಣ ಬಣ್ಣದ ಜಲಚರಗಳ ತೇಲಿಸಿಬಿಟ್ಟೆ
ಪುಟ್ಟ, ಚಿಟ್ಟೆಗಳ ಬಣ್ಣದಲ್ಲದ್ದಿ ಮೆರೆಯಲು ಬಿಟ್ಟೆ.
ಎಲ್ಲವೂ ನಿನ್ನಯ ಸೃಷ್ಟಿ. ಆದರೂ ಬೇರೆ ಬೇರೆ.
ಒಂದರ ಹಾಗೆ ಇನ್ನೊಂದಿಲ್ಲ.
ಒಂದರ ಬಣ್ಣ ಇನ್ನೊಂದಕ್ಕಿಲ್ಲ.
ಎಲ್ಲಿಂದ ತಂದೆ ಇಷ್ಟೊಂದು ವೈವಿಧ್ಯತೆ?

ಹೆಣ್ಣಿನ ಜತೆಗೆ ಗಂಡನ್ನಿಟ್ಟೆ
ಭಾವಗಳ ಓಟಕೆ ರಂಗನು ಎರೆದೆ.
ಕಾಮದ ಬೆಂಕಿಯ ಉರಿಸಿ ಹೊಸಹುಟ್ಟಿಗೆ ಇಂಬನ್ನಿತ್ತೆ.
ಪ್ರೀತಿ ಪಾಠದ ಅಕ್ಕರಿಗ ನೀನು
ಪ್ರೀತಿಯೇ ಜಗದ ಉಸಿರೆಂದೆ.
ಆದರೂ ಪ್ರೀತಿಯ ಜತೆಗೆ ದ್ವೇಷವನ್ನಿಟ್ಟೆ
ಸುಖದ ಜತೆಗೆ ದುಃಖವನ್ನಿಟ್ಟೆ
ಯಾಕೆ ಹೀಗೆ ಮಾಡಿದೆ?

ಹಗಲಿನಾಗಸದಲಿ ನೇಸರ ಹೊಂಬಿಸಲು
ಇರುಳಿನಾಕಾಶದಲಿ ಶಶಿಯ ತಂಬೆಳಕು;
ಅಂಬರದಂಗಳದಲಿ ನಕ್ಷತ್ರಗಳ ಹೊಳಪು;
ಮರಗಳ ತುಂಬ ಮಿಂಚುಳ್ಳಿ ಮಿಣುಕು,
ಮೋಡಗಳ ನಡುವೆ ಮಿಂಚಿನ ಝಳಪು;
ಬೆಳಕಿಗೆಂದೂ ಬರವಿಲ್ಲ.
ಆದರೆ ಮನಮನದೊಳಗೊಂದೊಂದು
ನಕ್ಷತ್ರವನ್ನಿಡಲು ಏಕೆ ಮರೆತೆ?

ಭೂಮಿಯ ಸಹನೆ, ಅಲೆಗಳ ಚಂಚಲತೆ
ಗಾಳಿಯ ಚೈತನ್ಯ, ಆಗಸದ ಐಕ್ಯತೆ
ಎಲ್ಲವೂ ಕಲಿಕೆಯ ಆಗರ. ಎಲ್ಲಕ್ಕೂ ನೀನೇ ಗುರು
ಎಲ್ಲರೂ ನಿನ್ನ ಕೈಯಲ್ಲಿ ಅಕ್ಷ,
ನೀ ಹೇಳಿದಂತೆ ಇಡೀ ಜಗ.
ಆದರೂ ಮುತ್ತಿದೆ ದ್ವೇಷದ ಹಗೆ; ನೋವಿನ ಧಗೆ
ಶಾಂತಿಯ ಏಕೆ ತುಟ್ಟಿಯಾಗಿಸಿದೆ?

ನಿನ್ನಯ ಬಣ್ಣದ ಬಾಂಡಲಿ ಅಕ್ಷಯ!
ರಂಗಿಗೆ ಬರವಿಲ್ಲ. ರಾಗಕೆ ಮೌನವಿಲ್ಲ
ನೀ ಬರೆವ ಚಿತ್ರಗಳಿಗೆ ಕೊನೆಯಿಲ್ಲ
ಇಡೀ ಬಹ್ಮಾಂಡವೇ ನಿನ್ನ ಕ್ಯಾನ್‌ವಾಸ್
ಎಲ್ಲವೂ ಅಗಾಧ, ಅಕಲಂಕ, ಅಕೃತಿಮ.
ಕಣ್ಣಿಗೆ ಕಾಣದ ಚಿತ್ರಿಕ ನೀನು;
ನಿನ್ನೊಲವು ಅಕ್ಷೀಣ. ನಿನ್ನ ಅಣತಿಗೆ ನಮ್ಮ ಸವಾಲಿಲ್ಲ.
ಎಲ್ಲವ ಹೊತ್ತ ಅಗಧರ ನೀನು. ನಿನಗೆ ನೀನೇ ಸವಾಲು.
ಎಲ್ಲಿರುವ ನೀನು? ಹೇಗಿರುವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ
Next post ಚಿಂತನೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys